Chintamani : ದಲಿತ ಪರ ಸಂಘಟನೆಗಳ ಒಕ್ಕೂಟವು ಸೋಮವಾರ ನಗರಸಭೆ ಸದಸ್ಯ ಅಗ್ರಹಾರ ಮುರಳಿ ಮೇಲೆ ನಡೆದಿದ್ದ ಹಲ್ಲೆ (assault) ಪ್ರಯತ್ನದ ಪ್ರಮುಖ ಆರೋಪಿಗಳನ್ನು ಬಂಧಿಸುವಂತೆ (arrest of the main accused) ಒತ್ತಾಯಿಸಿ ಚಿಂತಾಮಣಿ ನಗರದ ಡಿವೈಎಸ್‌ಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಗಾಯಾಳು ಮುರಳಿ ಮಾತನಾಡಿ, ಅಕ್ಟೊಬರ್ 13ರಂದು ಹಲ್ಲೆ ನಡೆದಿದ್ದು, 14 ರಂದು ಪೊಲೀಸರು ಮೊಕದ್ದಮೆ ದಾಖಲಿಸಿದ್ದರು. 15 ರಂದು ನನ್ನ ಹೇಳಿಕೆ ತೆಗೆದುಕೊಂಡಿದ್ದಾರೆ. ಯಾರು ಭಾಗಿಯಾಗಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ. ಪೊಲೀಸರು ನನ್ನ ಹೇಳಿಕೆ ಪ್ರಕಾರ ತನಿಖೆ ನಡೆಸದೆ, ಬಂಧಿತ ಆರೋಪಿಗಳು ಕೊಟ್ಟಿರುವ ಹೇಳಿಕೆ ಪ್ರಕಾರ ತನಿಖೆ ನಡೆಸುತ್ತಾ ದಿಕ್ಕು ತಪ್ಪಿದ್ದಾರೆ. ಘಟನೆಗೆ ವಿವಿಧ ಬಣ್ಣ ಕಟ್ಟಿ ದಿಕ್ಕು ತಪ್ಪಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಸಮಾಜಘಾತುಕ ಶಕ್ತಿಗಳ ಜತೆ ಪೊಲೀಸರು ಶಾಮೀಲಾಗಿದ್ದಾರೆ. ಘಟನೆಯ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕೈವಾಡವಿದೆ. ಎಸ್‌ಪಿ ಮತ್ತು ಡಿವೈಎಸ್‌ಪಿಯಿಂದ ತನಿಖೆ ಸಾಧ್ಯವಿಲ್ಲ. ಉನ್ನತ ಅಧಿಕಾರಿಗಳಿಂದ ತನಿಖೆ ನಡೆಯಬೇಕು. ಅಲ್ಲಿಯವರೆಗೂ ಪ್ರತಿಭಟನೆ ಮುಂದುವರೆಯುತ್ತದೆ” ಎಂದರು.
ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಅಕ್ಟೊಬರ್ 18 ರಂದು ಚಿಂತಾಮಣಿ ಬಂದ್ ನಡೆಸಲಾಗಿತ್ತು. ಹಾಗಾಗಿ ಪೊಲೀಸರು ಮೂರು ತಂಡಗಳನ್ನು ರಚಿಸಿ ಅಕ್ಟೊಬರ್ 21ರಂದು ಮೂರು ಮಂದಿ, ಅಕ್ಟೊಬರ್ 26ರಂದು ಒಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಆದರೆ ಪ್ರಮುಖ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ರಾಜಕೀಯ ಮತ್ತು ಆರ್ಥಿಕವಾಗಿ ಬಲಾಢ್ಯರಾಗಿರುವವರು ಅವರ ಬೆಂಬಲಕ್ಕೆ ನಿಂತು, ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾರೆ. ದಲಿತ ವಿರೋಧಿ ಎಸ್‌ಪಿ ನಾಗೇಶ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆಯ ಮಾಜಿ ಸದಸ್ಯ ಪ್ರಕಾಶ್, ಮುಖಂಡ ವಿಜಯನರಸಿಂಹ, ಕವಾಲಿ ವೆಂಕಟರವಣಪ್ಪ, ಜಿ.ನಾರಾಯಣಸ್ವಾಮಿ, ಮುಖಂಡರಾದ ಜನಾರ್ಧನ್, ರಾಮಪ್ಪ, ಆನಂದ್, ಜ.ನ.ನಾಗಪ್ಪ, ಕೃಷ್ಣಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.