H Cross, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಚ್. ಕ್ರಾಸ್‌ನಲ್ಲಿ ಶನಿವಾರ ಶ್ರೀ ಸೀತಾ ರಾಮಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಚಾಲನೆ ನೀಡಿದರು.
ಬೆಳಗ್ಗಿನಂದೇ ಪ್ರಾರಂಭವಾದ ವಿವಿಧ ಪೂಜಾ ವಿಧಾನಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಧ್ವಜಾರೋಹಣ, ಅಲಂಕಾರ ಸೇವೆ, ಪ್ರಾಕಾರೋತ್ಸವ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ಗರುಡೋತ್ಸವ, ಶಯನೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಭಕ್ತರ ಮನಗಳನ್ನು ಆಕರ್ಷಿಸಿದವು.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು ಹಾಗೂ ಇತರ ಪ್ರಸಾದಗಳನ್ನು ಸಮರ್ಪಣೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಪ್ರಾರ್ಥನೆ ಮಾಡಿದರು. ದೇವರ ಅಲಂಕಾರ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.
ಮೇಳದ ಅಂಗವಾಗಿ ಅನೇಕ ಅಂಗಡಿಗಳು ನೆಲೆಯಾಗಿದ್ದು, ಬತ್ತಾಸು, ಬುರುಗು, ಕಡ್ಲೇಬೀಜ ಮುಂತಾದ ತಿನಿಸುಗಳು ಜನರ ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ, ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ರೈತ ಮುಖಂಡ ಭಕ್ತರಹಳ್ಳಿ ಬೈರೇಗೌಡ, ಪ್ರಧಾನ ಅರ್ಚಕರಾದ ಪದ್ಮನಾಭಚಾರ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.