Jangamakote, Sidlaghatta : ಶಿಡ್ಲಘಟ್ಟ ಸರ್ಕಾರಿ ಪ್ರೌಢಶಾಲೆ ಜಂಗಮಕೋಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ (SKDRDP) ವತಿಯಿಂದ ಶುಕ್ರವಾರ ವಿದ್ಯಾರ್ಥಿಗಳಿಗಾಗಿ ಮಾದಕ ವಸ್ತುಗಳಿಂದ ದೂರವಿರುವ ಬಗ್ಗೆ ಜಾಗೃತಿ ಹಾಗೂ ಸ್ವಾಸ್ಥ್ಯ ಸಂಕಲ್ಪ (Swastya Sankalpa) ಕಾರ್ಯಕ್ರಮದಲ್ಲಿ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶಿವಕುಮಾರ್ ಅವರು ಮಾತನಾಡಿದರು.
ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಿದರೆ ಬದುಕು ಸ್ವಾಸ್ಥ್ಯದಿಂದ ಕೂಡಿರುತ್ತದೆ. ಇಂದಿನ ಯುವಜನತೆ ಒಳ್ಳೆಯ ಹವ್ಯಾಸಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಾಗರೀಕನಾಗಿ ಹೊರಹೊಮ್ಮಬೇಕು. ದುಶ್ಚಟಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ವಿದ್ಯಾರ್ಥಿ ಜೀವನದಲ್ಲಿ ದುಶ್ಚಟ ದುರಭ್ಯಾಸದ ದಾಸರಾಗದೇ ತಂದೆ ತಾಯಿಯವರು ಕಂಡಿರುವ ಕನಸನ್ನು ನನಸು ಮಾಡಲು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಈ ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಿದಾಗ ಮಾತ್ರ ಪೂಜ್ಯ ಧರ್ಮಾಧಿಕಾರಿಗಳ ಈ ಕಾರ್ಯಕ್ರಮ ಅರ್ಥಪೂರ್ಣವಾದೀತು ಎಂದರು.
ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಪ್ರಪಂಚದ 5 ಭೀಕರ ಬರ್ಭರ ಕಾಯಿಲೆಯಲ್ಲಿ ದುಶ್ಟಟ ದುರಭ್ಯಾಸವು ಒಂದು. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ತಾನು ಮಾತ್ರ ನರಕ ಯಾತನೆ ಅನುಭವಿಸಿದರೆ, ದುಶ್ಚಟ ಇರುವ ವ್ಯಕ್ತಿಯ ಮನೆಯಲ್ಲಿ ಎಲ್ಲರೂ ನರಕಯಾತನೆ ಅನುಭವಿಸಬೇಕಾಗುತ್ತದೆ. ಇಂತಹ ದುಶ್ಚಟದ ದಾಸರಾಗದೇ ಜೀವನದಲ್ಲಿ ಉನ್ನತ ಸಾಧನೆ ಮಾಡಿ ಈ ಸಮಾಜಕ್ಕೆ ಕೀರ್ತಿ ತರುವಂತಹ ವ್ಯಕ್ತಿಗಳು ನೀವಾಗಬೇಕು. ಮದ್ಯಮುಕ್ತ ಸಮಾಜ ನಿರ್ಮಾಣ ಮದ್ಯದಂಗಡಿಗಳನ್ನು ಬಂದ್ ಮಾಡಿದರೆ ಸಾಧ್ಯವಿಲ್ಲ. ಮದ್ಯವ್ಯಸನಿಯ ಮನಪರಿವರ್ತನೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಮುಖ್ಯ ಶಿಕ್ಷಕಿ ರಾಜೇಶ್ವರಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಇಂದಿನ ದಿನದಲ್ಲಿ ಅತ್ಯಂತ ಅವಶ್ಯಕ ಹಾಗೂ ಅರ್ಥಪೂರ್ಣವಾಗಿದ್ದು ಹಾದಿ ತಪ್ಪುತ್ತಿರುವ ವಿದ್ಯಾರ್ಥಿಗಳಿಗೆ ಸರಿ ದಾರಿಯನ್ನು ತೋರಿಸುವ ದಿಕ್ಸೂಚಿಯಂತಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪ್ರಕಾಶ್, ನಾಗರತ್ನ, ಲತಾ, ರಶ್ಮಿ, ಮೇಲ್ವಿಚಾರಕರಾದ ಚೇತನ್, ಸೇವಾಪ್ರತಿನಿಧಿ ನಾಗಮ್ಮ ಹಾಜರಿದ್ದರು.